ಸೋಲಿನಿಂದ ಕೆಂಗೆಟ್ಟಿದ್ದ ಹೈದರಾಬಾದ್ ತಂಡಕ್ಕೆ ತವರಿನಲ್ಲೇ ಭರ್ಜರಿ ಗೆಲುವು

Share

ಹೈದರಾಬಾದ್,ಏ,೧೩-ತವರಿನಲ್ಲಿ ಹೈದರಾಬಾದ್ ತಂಡ ಆಡಿದ ಅದ್ಭುತ ಆಟಕ್ಕೆಪಂಚಾಬ್ ನಿಜಕ್ಕೂ ತತ್ತರಿಸಿಹೋಯಿತು.ಸೋಲಿನಿಂದ ಕೆಂಗೆಟ್ಟಿದ್ದ ತಂಡಕ್ಕೆ ಅಭಿಷೇಕ್ ಶರ್ಮಾ ಸಿಡಿಸಿದ ಸಿಕ್ಸರ್‌ಗಳು ಹೈದರಾಬಾದ್ ಗೆಲುವಿಗೆ ಕಾರಣವಾಯಿತು.

ಹೈದರಾಬಾದ್ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ಕೂಡ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ಶ್ರೇಯಸ್ ಅಯ್ಯರ್ ಪಡೆ ೨೦ ಓವರ್‌ಗೆ ೬ ವಿಕೆಟ್ ನಷ್ಟಕ್ಕೆ ೨೪೫ ರನ್ ಪೇರಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್‌ನಲ್ಲಿ ಮಿಂಚಿನ ರನ್ ಹೊಳೆ ಹರಿಸಿತು. ಬ್ಯಾಟಿಂಗ್‌ನಲ್ಲಿ ಮತ್ತೆ ಫಾರ್ಮ್‌ಗೆ ಬಂದಂತೆ ಭಾಸವಾಯಿತು. ೧೮.೩ ಓವರ್‌ಗೆ ಕೇವಲ ೨ ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಹೈದರಾಬಾದ್ ಗೆದ್ದು ಬೀಗಿತು. ಆ ಮೂಲಕ ಐಪಿಎಲ್ ಇತಿಹಾಸದಲ್ಲೇ ಬೃಹತ್ ಮೊತ್ತವನ್ನು ಚೇಸ್ ಮಾಡಿ ಗೆದ್ದ ೨ನೇ ತಂಡವಾಗಿ ದಾಖಲೆ ಬರೆಯಿತು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಪರ ಬ್ಯಾಟಿಂಗ್‌ನಲ್ಲಿ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ೩೬ ಬಾಲ್‌ಗೆ ೬ ಸಿಕ್ಸರ್ ಮತ್ತು ೬ ಫೋರ್‌ಗಳೊಂದಿಗೆ ೮೨ ರನ್ ಸಿಡಿಸಿ ಗಮನ ಸೆಳೆದರು. ಪ್ರಿಯಾಂಶ್ ಆರ್ಯ ೩೬, ಪ್ರಭ್‌ಸಿಮ್ರಾನ್ ಸಿಂಗ್ ೪೨, ನೇಹಲ್ ವಧೇರಾ ೨೭ ರನ್ ಗಳಿಸಿದರು. ಕೊನೆ ಓವರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ೪ ಸಿಕ್ಸರ್ ಸಿಡಿಸಿ ಕೇವಲ ೧೧ ಬಾಲ್‌ಗೆ ೩೪ ರನ್ ಗಳಿಸಿ ಮಾರ್ಕಸ್ ಸ್ಟೊಯಿನಿಸ್ ಅಬ್ಬರಿಸಿದರು.

ಪಂಜಾಬ್ ನೀಡಿದ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಹೈದರಾಬಾದ್ ಆರಂಭದಲ್ಲೇ ಅಬ್ಬರಿಸಿ ಬೊಬ್ಬಿರಿಯಿತು. ಕಿಂಗ್ಸ್ ಬೌಲರ್‌ಗಳನ್ನು ಹೆಡ್ ಮತ್ತು ಅಭಿಷೇಕ್ ಜೋಡಿ ಬೆಂಡೆತ್ತಿತು. ಈ ಜೋಡಿ ೭೫ ಬಾಲ್‌ಗೆ ೧೭೧ ರನ್‌ಗಳ ಅಮೋಘ ಜೊತೆಯಾಟ ನೀಡಿತು. ತಂಡದ ಮೊತ್ತ ೧೭೧ ರನ್ ಇದ್ದಾಗ ಟ್ರಾವಿಸ್ ಹೆಡ್ (೬೬ ರನ್, ೩೭ ಬಾಲ್, ೯ ಫೋರ್, ೩ ವಿಕೆಟ್) ಅರ್ಧಶತಕ ಗಳಿಸಿ ಔಟಾದರು.

ಅಂತಿಮ ಘಟ್ಟದ ವರೆಗೂ ಅಮೋಘ ಸಿಕ್ಸರ್, ಫೋರ್ ಮೂಲಕ ರನ್ ಹೊಳೆ ಹರಿಸಿದ ಅಭಿಷೇಕ್ ಶರ್ಮಾ ೫೫ ಬಾಲ್‌ಗೆ ೧೪೧ ರನ್ (೧೦ ಸಿಕ್ಸರ್, ೧೪ ಫೋರ್) ಸಿಡಿಸಿದರು. ಇವರಿಬ್ಬರ ಆಟ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಕ್ಲಾಸೆನ್ ೨೨ ರನ್ (ಔಟಾಗದೇ), ಇಶನ್ ಕಿಶನ್ ೯ ರನ್ (ಔಟಾಗದೇ) ಗಳಿಸಿದರು. ಅಂತಿಮವಾಗಿ ೧೮.೩ ಬಾಲ್‌ಗೆ ಕೇವಲ ೨ ವಿಕೆಟ್ ನಷ್ಟಕ್ಕೆ ಎಸ್‌ಆರ್‌ಹೆಚ್ ೨೪೭ ರನ್ ಗಳಿಸಿ ಗೆದ್ದು ಬೀಗಿತು. ಪಂಜಾಬ್ ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದು ಕಂಡುಬಂತು. ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮ ಪಂಜಾಬ್ ಹೀನಾಯ ಸೋಲನುಭವಿಸಲು ಕಾರಣವಾಯಿತು.

Girl in a jacket
error: Content is protected !!