ನವದೆಹಲಿ,ಏ,೨೭-ಇಲ್ಲಿನ ಅರುಣ್‌ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ನೀಡಿದ ೧೬೩ ರನ್‌ಗಳ ಗುರಿಯನ್ನು ಬೆನ್ನು ಹತ್ತಿದ ಆರ್‌ಸಿಬಿ ಇನ್ನೂ ಒಂಬತ್ತು ಎಸೆತಗಳ ಬಾಕಿ ಇರುವಾಗಲೇ ೬ ವಿಕಟ್ ಅಂತರದಿಂದ ಭರ್ಜರಿ ಜಯ ಸಾಧಿಸಿ ಸೇಡು ತೀರಿಸಿಕೊಂಡಿದೆ.
ಹೌದು..ವಿರಾಟ್ ಕೊಹ್ಲಿ ಯಾರು ಏನೇ ಕೊಟ್ಟರೂ ಅದನ್ನು ತಿರುಗಿಸಿ ಕೊಡುವುದರಲ್ಲಿ ನಿಸ್ಸೀಮರು.. ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ೧೬೩ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ಕೃನಾಲ್ ಪಾಂಡ್ಯಾ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕಗಳ ನೆರವಿನಿಂದ ಜಯಭೇರಿ ಭಾರಿಸಿತು. ಆರ್ ಸಿಬಿ ೧೮.೩ ಓವರ್ ನಲ್ಲಿ ೧೬೫ ರನ್ ಗಳಿಸಿ ಇನ್ನೂ ೯ ಎಸೆತ ಬಾಕಿ ಇರುವಂತೆಯೇ ೬ ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿತು.
ಈ ಪಂದ್ಯದಲ್ಲಿ ಆರ್ ಸಿಬಿ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಮಹತ್ತರ ಪಾತ್ರವಹಿಸಿದರು. ವಿರಾಟ್ ಕೊಹ್ಲಿ ೪೭ ಎಸೆತಗಳಲ್ಲಿ ೪ ಬೌಂಡರಿ ಸಹಿತ ೫೧ ರನ್ ಗಳಿಸಿದರು.ಆದರೆ ಗೆಲುವಿನ ಅಂತಿಮ ಹಂತದಲ್ಲಿ ಎಡವಿದ ಕೊಹ್ಲಿ ಚಮೀರಾ ಬೌಲಿಂಗ್ ನಲ್ಲಿ ಭರ್ಜರಿ ಹೊಡೆತಕ್ಕೆ ಕೈಹಾಕಿ ಸ್ಚಾರ್ಕ್ ಗೆ ಕ್ಯಾಚ್ ನೀಡಿ ಹೊರನಡೆದರು. ಕೃನಾಲ್ ಪಾಂಡ್ಯಾ ಮತ್ತು ಟಿಮ್ ಡೇವಿಡ್ ಇನ್ನೂ ೯ ಎಸೆತ ಬಾಕಿ ಇರುವಂತೆಯೇ ಗೆಲುವಿನ ಔಪಚಾರಿಕತೆ ಪೂರ್ಣಗೊಳಿಸಿದರು.
ಇನ್ನು ಇದೇ ಪಂದ್ಯದಲ್ಲಿ ಆರ್ ಸಿಬಿ ರನ್ ಮೆಷಿನ್ ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಎಲ್ ರಾಹುಲ್ ರ ಬಾಕಿಯೊಂದನ್ನು ಚುಕ್ತಾ ಮಾಡಿದ್ದಾರೆ. ಈ ಹಿಂದೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಕೆಎಲ್ ರಾಹುಲ್ ’ಇದು ನನ್ನ ಗ್ರೌಂಡ್ ಸಂಭ್ರಮಾಚರಣೆ’ ಮಾಡಿದ್ದರು.
ಅಂದು ಮೈದಾನದಲ್ಲಿ ಗೆಲುವಿನ ಶಾಟ್ ಭಾರಿಸುತ್ತಿದ್ದಂತೆಯೇ ಮೈದಾನದಲ್ಲಿ ಕಾಂತಾರಾ ಸಿನಿಮಾ ಶೈಲಿಯಲ್ಲಿ ಬ್ಯಾಟ್ ನಿಂದ ವೃತ್ತ ಸುತ್ತಿ ಬ್ಯಾಟ್ ಕುಕ್ಕಿ ಇದು ನನ್ನ ಗ್ರೌಂಡ್ ಎಂದು ಆಕ್ರೋಶ ಭರಿತರಾಗಿ ಹೇಳಿದ್ದರು.
ಅಂದೇ ಆರ್ ಸಿಬಿ ಅಭಿಮಾನಿಗಳು ಕೊಹ್ಲಿ ದೆಹಲಿಯಲ್ಲಿ ಇದಕ್ಕೆ ತಿರುಗೇಟು ನೀಡುತ್ತಾರೆ ಎಂದು ಸವಾಲೆಸೆದಿದ್ದರು. ಇದೀಗ ಆ ಸವಾಲು ನಿಜವಾಗಿದ್ದು, ಇಂದಿನ ಪಂದ್ಯ ಮುಕ್ತಾಯದ ಬಳಿಕ ಕೊಹ್ಲಿ ಮೈದಾನಕ್ಕೆ ಬಂದು ಮೈದಾನದಲ್ಲಿದ್ದ ಕೆಎಲ್ ರಾಹುಲ್ ಬಳಿ ಹೋಗಿ ಖಾಲಿ ಕೈಯಿಂದಲೇ ಅವರ ಮುಂದೆಯೇ ವೃತ್ತ ಸುತ್ತಿ ಕೆಎಲ್ ರಾಹುಲ್ ರನ್ನು ಇದು ನನ್ನ ಮೈದಾನ ಎಂದು ಛೇಡಿಸಿದ್ದಾರೆ.
ಈ ವೇಳೆ ಅಲ್ಲಿಯೇ ಅಕ್ಕಪಕ್ಕದಲ್ಲಿದ್ದ ಸಹ ಆಟಗಾರರು ಬಿದ್ದು ಬಿದ್ದು ನಕ್ಕಿದ್ದಾರೆ. ಬಳಿಕ ಕೊಹ್ಲಿ ರಾಹುಲ್ ರನ್ನು ಅಪ್ಪಿ ನಗೆ ಬೀರಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.