ಹಂಪೆಯ ವಿಠ್ಠಲ ದೇವಾಲಯ, ಕಲ್ಲಿನ ರಥ ಮತ್ತು ಸಂಗೀತ ಕಂಬಗಳೂ…
ಹಂಪೆಯ ಅತ್ಯಂತ ಕಲಾತ್ಮಕ ಮತ್ತು ವೈಭವಯುತ ದೇಗುಲವೆಂದರೆ ಅದು ವಿಠಲ ದೇವಾಲಯವೇ ಆಗಿದೆ. ವಿಜಯನಗರ ಕಾಲದ ಕಲೆ, ವಾಸ್ತುಶಿಲ್ಪ, ಮೂರ್ತಿಶಿಲ್ಪವಲ್ಲದೆ ಸಂಗೀತ, ನೃತ್ಯಗಳಿಗೆ ಕೈಗನ್ನಡಿಯಾಗಿ ನಿಂತಿರುವ ದೇವಾಲಯವಿದು. ಹಂಪೆ ಎಂದಾಕ್ಷಣ ನೋಡಲೇ ಬೇಕಾದದ್ದು ಕಲ್ಲಿನ ರಥ. ಜಗತ್ತಿನ ಗಮನ ಸೆಳೆದು ವಿಶ್ವಪ್ರಸಿದ್ಧಿ ಪಡೆದ ವಾಸ್ತುವಿದು. ಇದು ವಿಜಯನಗರ ಅಥವಾ ಹಂಪೆಯ ಐಕಾನ್ ಎನ್ನುವಂತೆ ಚಿರಪರಿಚಿತವಾಗಿರುವುದು ಗಮನಾರ್ಹ. ಹಾಗೆಯೇ ಹಂಪೆಯ ಇತರ ದೇವಾಲಯಗಳಿಗಿಂತ ಅತ್ಯಂತ ಸುಂದರವಾಗಿ ಮತ್ತು ಸೂಕ್ಷ್ಮ ಕೆತ್ತನೆಗಳನ್ನು ಹೊಂದಿದ ವಿಸ್ತಾರವಾದ ದೇವಾಲಯವಿದು. ಅಲ್ಲದೆ ವಿಬಿsನ್ನ ಹಾಗೂ ವಿಶಿಷ್ಟ ಶೈಲಿಯ ಕಂಬಗಳಾದ ಸಂಯುಕ್ತ ಅಥವಾ ಸಂಗೀತ ಕಂಬಗಳನ್ನು ಹೊಂದಿರುವ ದೇವಾಲಯವೂ ಇದೇ ಆಗಿದೆ.
ವಿಠ್ಠಲ ದೇವಾಲಯದ ನಿರ್ಮಾಣ: ಈ ದೇವಾಲಯವು ಕೃಷ್ಣದೇವರಾಯನಿಗೂ ಮುಂಚೆಯೇ ನಿರ್ಮಾಣವಾಗಿತ್ತೆಂಬುದು ವಿದ್ವಾಂಸರ ಅಭಿಮತ. ಆದರೆ ಇದಕ್ಕೆ ದೇವಾಲಯದಲ್ಲಿರುವ ಸುಮಾರು ನಲವತ್ತಕ್ಕೂ ಹೆಚ್ಚು ಶಾಸನಗಳಲ್ಲಿ ಯಾವುದೇ ವಿವರವಿಲ್ಲ. ಇಲ್ಲಿನ ಶಾಸನಗಳಲ್ಲಿ ಕೃಷ್ಣದೇವರಾಯನ ರಾಣಿಯರಾದ ಚಿನ್ನಾದೇವಿ ಮತ್ತು ತಿರುಮಲಾದೇವಿಯರು ವಿಠಲ ದೇವರಿಗೆ ೧೫೧೩ರಲ್ಲಿ ಗೋಪುರಗಳನ್ನು ಕಟ್ಟಿಸಿದರೆಂದು ಸ್ಪಷ್ಟಪಡಿಸಿವೆ.
ಹಾಗೆಯೇ ದೇವಾಲಯದ ಬಲಬದಿಯ ನೂರುಕಾಲ ಮಂಟಪವನ್ನು ೧೫೧೬ರಲ್ಲಿ ಕೃಷ್ಣದೇವರಾಯನೇ ನಿರ್ಮಿಸಿದನೆಂಬ ಸಂಗತಿಯನ್ನು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಪ್ರತ್ಯೇಕವಾಗಿ ಸಾರುವ ಮೂರು ಶಾಸನಗಳಿರುವುದು ವಿಶೇಷ. ಅಲ್ಲದೆ ಕೃಷ್ಣದೇವರಾಯ ನೀಡಿದ ಅನೇಕ ದಾನದತ್ತಿ ಶಾಸನಗಳು ಇಲ್ಲಿವೆ. ಅಚ್ಯುತರಾಯನ ಕಾಲದಲ್ಲಿ ಈ ದೇಗುಲದ ಪೂರ್ವ ಮತ್ತು ಉತ್ತರ ಗೋಪುರಗಳಿಗೆ ರಘುವಪ್ಪನಾಯಕ ಎಂಬುವವನು ೧೫೩೮ರಲ್ಲಿ ಸುವರ್ಣ ಕಳಸಗಳನ್ನು ಪ್ರತಿಷ್ಟಾಪಿಸಿದನೆಂದು, ೧೫೫೪ರಲ್ಲಿ ತಿಮ್ಮರಾಜ ಎಂಬುವವನು ಸದಾಶಿವರಾಯನ ಕಾಲದಲ್ಲಿ ಉಯ್ಯಾಲೆ ಮಂಟಪವನ್ನು ಕಟ್ಟಿಸಿದ ವಿವರಗಳಿವೆ. ವಿಠಲ ದೇವಾಲಯದಲ್ಲಿ ದೊರೆತ ಈ ಎಲ್ಲ ಶಾಸನಗಳು ಕೃಷ್ಣದೇವರಾಯ ಮತ್ತು ಅವನ ನಂತರದ ಅರಸರವೇ ಆಗಿವೆ. ದೇವಾಲಯದ ರಚನೆ, ಕಲೆ ಮತ್ತು ವಾಸ್ತುಶಿಲ್ಪವನ್ನು ಪರಿಶೀಲಿಸಿದರೂ ನಮಗೆ ದೊರೆಯುವುದು ಅತ್ಯಂತ ಸುಧಾರಿತ ಮತ್ತು ನಾವಿನ್ಯತೆಯನ್ನು ಮೈಗೂಢಿಸಿಕೊಂಡ ವಿಜಯನಗರ ಶೈಲಿಯೇ ಆಗಿದೆ. ಮಹಾಮಂಟಪದ ಸಂಗೀತ ಕಂಬಗಳು ಮತ್ತು ಕಲ್ಲಿನ ರಥದಂತಹ ವಿಶಿಷ್ಟ ಪ್ರಕಾರಗಳನ್ನು ಪ್ರಯೋಗಿಸಿದ ದೇಗುಲ ಅದು ವಿಠಲ ದೇವಾಲಯವಾಗಿದೆ. ಈ ಎಲ್ಲ ಆಕರ, ಲಕ್ಷಣಗಳ ಹಿನ್ನೆಲೆಯಲ್ಲಿ ವಿಠಲ ದೇವಾಲಯವು ೧೫೧೩ರ ಹೊತ್ತಿಗೆ ಕೃಷ್ಣದೇವರಾಯನ ಕಾಲದಲ್ಲಿ ನಿರ್ಮಾಣವಾದದ್ದು ದೃಢವಾಗುತ್ತದೆ.
ವಿಠ್ಠಲ ದೇವಾಲಯವನ್ನು ವಿಶಾಲವಾದ ಪ್ರಾಂಗಣದಲ್ಲಿ ಗರ್ಭಗೃಹ, ಪ್ರದಕ್ಷಿಣ ಪಥ, ಅಂತರಾಳ, ನವರಂಗ, ಮಹಾಮಂಟಪಗಳಿಂದ ನಿರ್ಮಿಸಲಾಗಿದೆ. ಎಡಭಾಗದಲ್ಲಿ ಅಮ್ಮನವರ ಗುಡಿ, ಮುಂಭಾಗದಲ್ಲಿ ಗರುಡ ಮಂಟಪವಾದ ಕಲ್ಲಿನ ರಥಗಳಿವೆ. ದೇಗುಲದ ಆವರಣದಲ್ಲಿ ನೂರುಕಾಲ ಮಂಟಪ, ಕಲ್ಯಾಣ ಮಂಟಪ, ಉತ್ಸವ ಮಂಟಪಗಳಿದ್ದು ಸುತ್ತಲೂ ಸಾಲುಮಂಟಪಗಳನ್ನು ಒಳಗೊಂಡ ಪ್ರಾಕಾರಕ್ಕೆ ಮೂರು ದ್ವಾರಗೋಪುರಗಳಿವೆ. ದೇವಾಲಯದ ಮುಂಭಾಗದಲ್ಲಿ ಇಕ್ಕೆಲಗಳಲ್ಲಿ ಸಾಲುಮಂಟಪಗಳನ್ನು ಒಳಗೊಂಡ ವ್ಯಾಪಾರ ಬೀದಿಯಿದೆ. ಇದು ವಿಠಲದೇವರ ರಥಬೀದಿಯೂ ಆಗಿದ್ದಿತು.
ಮಹಾಮಂಟಪ: ಈ ದೇಗುಲದ ಮಹಾಮಂಟಪದಲ್ಲಿ ಕಡೆಯಲಾದ ಕಂಬಗಳು ವಿಜಯನಗರ ಕಾಲದ ವಾಸ್ತು ಪರಂಪರೆಯ ಪ್ರಸಿದ್ಧ ಕಲಾಕೃತಿಗಳಾಗಿವೆ. ಅಖಂಡ ಬಂಡೆಗಲ್ಲಿನಲ್ಲಿ ಕಡೆಯಲಾದ ಈ ಕಂಬಗಳು ವಿಶಿಷ್ಟ ವಿನ್ಯಾಸ, ರಚನೆ ಹಾಗೂ ಕಲಾತ್ಮಕತೆಯನ್ನು ಹೊಂದಿವೆ. ಇವುಗಳನ್ನು ಸಂಯುಕ್ತ ಕಂಬಗಳೆಂದೂ ಕರೆಯುವರು. ಇವುಗಳಲ್ಲಿ ಕೆಲವು ಆನೆ, ಕುದುರೆ, ಸಿಂಹ, ವ್ಯಾಳಗಳು ಜಿಗಿಯುವ ಚಿತ್ರಣಗಳನ್ನೂ ಒಳಗೊಂಡಿವೆ. ಸಂಯುಕ್ತ ಕಂಬಗಳಲ್ಲಿರುವ ಚಿಕ್ಕ ಚಿಕ್ಕ ಅಲಂಕಾರಿಕ ಕಂಬಗಳು ಸಂಗೀತದ ಸಪ್ತಸ್ವರಗಳನ್ನು ಹೊರಹೊಮ್ಮಿಸುವ ವಾದ್ಯಗಳೇ ಆಗಿವೆ. ಸ್ವರಗಳ ಹಿನ್ನೆಲೆಯಲ್ಲಿ ಇವುಗಳನ್ನು ಸಂಗೀತ ಕಂಬಗಳೆಂದೂ ಕರೆಯುವರು. ಇವು ಸಂಗೀತ, ನೃತ್ಯ, ಕಲೆ ಮತ್ತು ವಾಸ್ತುಶಿಲ್ಪಕ್ಕೆ ವಿಜಯನಗರ ಕಾಲದಲ್ಲಿ ಅರಸರು ನೀಡಿದ್ದ ಪ್ರೋತ್ಸಾಹದ ಪ್ರತೀಕಗಳೇ ಆಗಿವೆ. ಬೃಹತ್ ಬಂಡೆಗಲ್ಲನ್ನು ಕಂಬವನ್ನಾಗಿ ಪರಿವರ್ತಿಸಿ ಅದರಲ್ಲಿ ಕಾಂಡದ ಮಧ್ಯದಲ್ಲಿ ಚಿಕ್ಕ ಚಿಕ್ಕ ಹತ್ತಾರು ಕಂಬಗಳನ್ನು ಕಡೆದಿರುವರು.
ಈ ಚಿಕ್ಕ ಕಂಬಗಳು ಅಖಂಡ ಕಂಬದ ಭಾಗವಾಗಿದ್ದು, ಮಧ್ಯೆ ಟೊಳ್ಳಾದ ಭಾಗವಿರುವುದರಿಂದ ತಾನಾಗಿಯೇ ಶಬ್ದವು ಹೊರಹೊಮ್ಮುತ್ತದೆ. ಆದರೆ ಒಂದೊಂದು ಕಂಬವೂ ಒಂದೊಂದು ಬಗೆಯ ಶಬ್ದವನ್ನು ಉಂಟುಮಾಡುತ್ತವೆ.. ಈ ಬಗೆಯಲ್ಲಿ ವಿಬಿsನ್ನ ಸ್ವರವನ್ನು ಹೊರಹೊಮ್ಮಲು ಅಂದಿನ ಶಿಲ್ಪಿ ಅಳವಡಿಸಿದ ವಿಶಿಷ್ಟ ವಾಸ್ತುತಂತ್ರ ಗಮನಾರ್ಹವಾದದ್ದು. ಅದೆಂದರೆ ಕಂಬಗಳ ದಪ್ಪ, ಎತ್ತರ, ಗಾತ್ರ ಹಾಗೂ ಆಕಾರಗಳಲ್ಲಿ ವ್ಯತ್ಯಾಸವನ್ನು ಮಾಡಿರುವುದೇ ಆಗಿದೆ. ಈ ಕಂಬಗಳನ್ನು ವೃತ್ತಾಕಾರ, ಚತುರ್ಮುಖ, ಷಣ್ಮುಖ, ಅಷ್ಟ ಮುಖಗಳಲ್ಲಿ ಕಡೆಯುವುದರ ಜೊತೆಗೆ, ಎತ್ತರದಲ್ಲೂ ಒಂದರಿಂದ ಇನ್ನೊಂದು ಬಿsನ್ನವಾಗಿವೆ. ಇದರಿಂದ ಕಂಬಗಳಲ್ಲಿ ಒಂದೊಂದೂ ವಿಬಿsನ್ನ ಸ್ವರ ಹೊರಡುತ್ತದೆ. ಹಬ್ಬಹರಿದಿನ, ತೆಪ್ಪೋತ್ಸವ, ರಥೋತ್ಸವ ಮೊದಲಾದ ಸಂದರ್ಭಗಳಲ್ಲಿ ಈ ಮಂಟಪವು ಪ್ರಧಾನ ಪಾತ್ರವನ್ನು ವಹಿಸಿದ್ದಿತು. ಅಲ್ಲದೆ ಸಂಗೀತ, ನೃತ್ಯಾದಿ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತಿತ್ತು. ಅಂದು ವಿಗ್ರಹ ಪೂಜೆಯಂತೆಯೇ ನರ್ತನ ಸೇವೆಯೂ ಸಾಮಾನ್ಯವಾಗಿತ್ತು. ಇದಕ್ಕೆ ಅಂದಿನ ಶಾಸನಗಳಲ್ಲಿ ನೀಡಿರುವ ನಟುವಂಗ ಅಥವಾ ನಾಟ್ಯ ಸೇವೆಯ ಪಾಲು ಪ್ರಮುಖ ಸಾಕ್ಷ್ಯವಾಗಿದೆ. ಅಲ್ಲದೆ ಈ ಕಾರ್ಯಕ್ಕೆಂದೇ ನರ್ತಕಿ ಅಥವಾ ದೇವದಾಸಿಯರನ್ನು ನೇಮಿಸಿ ಅವರಿಗೆ ದೇವಾಲಯದ ಆದಾಯದಲ್ಲಿ ನಟುವಂಗ ಪಾಲನ್ನು ನೀಡಲಾಗುತ್ತಿತ್ತು.
ವಿಜಯನಗರ ಕಾಲದಲ್ಲಿ ನೂರಾರು ಜನರು ವೀಕ್ಷಿಸಲು ಅನುವಾಗುವಂತಹ ಮಹಾಮಂಟಪವನ್ನು ಸಂಗೀತ, ನೃತ್ಯಗಳಿಗೆಂದೇ ನಿರ್ಮಿಸಲಾಯಿತು. ಅಲ್ಲದೆ ಅದನ್ನು ಕಲಾತ್ಮಕವಾಗಿ ನಿರ್ಮಿಸುವ ಮೂಲಕ ವಿಜಯನಗರ ಅರಸರು ಸಂಗೀತ ಮತ್ತು ನೃತ್ಯಗಳಿಗೆ ವಿಶೇಷ ಪ್ರೋತ್ಸಾಹವನ್ನು ನೀಡಿದ್ದಾರೆ.
ಕಲ್ಲಿನ ರಥ: ಹಂಪೆಯ ಪ್ರಮುಖ ಆಕರ್ಷಣೆಗಳಲ್ಲಿ ಮುಖ್ಯವಾದ ರಚನೆ ವಿಠಲ ದೇವಾಲಯದಲ್ಲಿರುವ ಕಲ್ಲಿನ ರಥ. ಇದು ಅಂದಿನ ಶಿಲ್ಪಿಯ ಚಾತುರ್ಯವೇ ಸರಿ. ದೇವಾಲಯಗಳಲ್ಲಿ ಮುಖ್ಯ ದೇವತಾ ದೇಗುಲದ ಮುಂಭಾಗದಲ್ಲಿ ವಾಹನ, ವಾಹನ ಮಂಟಪವನ್ನು ನಿರ್ಮಿಸುವುದು ಸಹಜವೇ. ಆದರೆ ವಿಠಲ ದೇವಾಲಯದ ವಿಶೇಷತೆಯೆಂದರೆ ವಿಷ್ಣುವಿನ ವಾಹನವಾದ ಗರುಡನಿಗಾಗಿ ಕಟ್ಟಲಾದ ವಿಶಿಷ್ಠ ಮಂಟಪ ಈ ಕಲ್ಲಿನ ರಥವಾಗಿದೆ. ಇದೊಂದು ಗರುಡ ದೇಗುಲವೇ ಆಗಿದೆ. ವಾಹನ ಮಂಟಪವನ್ನು ಅಲಂಕಾರಿಕ ರಥದಂತೆ ನಿರ್ಮಿಸಿ ಅದಕ್ಕೆ ಇಟ್ಟಿಗೆ, ಗಾರೆ-ಗಚ್ಚುಗಳಿಂದ ಶಿಖರವನ್ನೂ ಕಟ್ಟಿದ್ದುದು ವಿಶೇಷ. ಆದರೆ ಶಿಖರದ ಭಾರದಿಂದ ರಥವು ಜರ್ಜರಿತವಾದ ಕಾರಣ ಅದನ್ನು ತೆಗೆದು ಹಾಕಲಾಗಿದೆ.
ವ್ಯಾಸರಾಯರ ಉಲ್ಲೇಖ: ೧೫೧೩ರ ಶಾಸನದಲ್ಲಿ ವಿಠಲ ದೇವರಿಗೆ ಅನೇಕ ದಾನಗಳನ್ನು ಬಿಟ್ಟಿದ್ದು, ಅದರೊಂದಿಗೆ ವ್ಯಾಸರಾಯರಿಗೂ ದಾನದ ಮೂರು ಪಾಲನ್ನು ನೀಡಿರುವುದು ಗಮನಾರ್ಹ. ಶಾಸನದಲ್ಲಿ ಕೃಷ್ಣದೇವರಾಯ ತನ್ನ “ಗುರುವುಗಳು ವ್ಯಾಸರಾಯರಿಗೆ ಪಾಲು ಮೂರು ಎಂದೇ ಹೇಳಿದೆ.
ಉತ್ಸವಾಚರಣೆಗಳು: ವಿಠಲ ದೇವಾಲಯದಲ್ಲಿ ನಡೆಯುತ್ತಿದ್ದ ಹಬ್ಬಹರಿದಿನ, ಉತ್ಸವಾಚರಣೆಗಳನ್ನು ಶಾಸನಗಳು ವಿವರವಾಗಿ ಹೇಳಿವೆ. ಉಗಾದಿ, ದೀಪಾವಳಿ, ಮಹಾನವಮಿ, ವಿಜಯದಶಮಿ, ಶೀರಾಮನವಮಿ, ಗೋಕುಲಾಷ್ಟಮಿ, ಮಕರ ಸಂಕ್ರಾಂತಿ, ವಾಮನ ಜಯಂತಿ, ನರಸಿಂಹ ಜಯಂತಿ ಮೊದಲಾದ ಹಬ್ಬಗಳಂದು ವಿಶೇಷ ಪೂಜಾ ಉತ್ಸವಗಳು ಜರುಗುತ್ತಿದ್ದವು. ಅಲ್ಲದೆ ತೆಪ್ಪೋತ್ಸವ, ರಥೋತ್ಸವಗಳೂ ಜರುಗುತ್ತಿದ್ದು, ರಥ ಅಥವಾ ತೇರಿನ ಶೃಂಗಾರವನ್ನೂ ಸೀರೆ, ಕರೆಗಳಿಂದ ಮಾಡುತ್ತಿದ್ದರು. ಅಲ್ಲದೆ ತೇರು ಬೀದಿಯ ಎದುರು ಮಂಟಪವಾದ ಪರಾಂಕುಶ ಮಂಟಪಕ್ಕೆ ಚಪ್ಪರವನ್ನು ಹಾಕಿ ಶೃಂಗರಿಸುತ್ತಿದ್ದರೆಂದೂ ಬಣ್ಣಿಸಲಾಗಿದೆ. ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಉತ್ಸವದಲ್ಲಿ ವಾದ್ಯದವರು ಅದರಲ್ಲೂ ಹೆಣ್ಣುಮೇಳ, ಗಂಡುಮೇಳಗಳು ಭಾಗವಹಿಸುತ್ತಿದ್ದವು. ಅದರಲ್ಲೂ ವಿಶೇಷವಾಗಿ ರಥೋತ್ಸವದ ವೈಭವ ಹೆಚ್ಚಲು ಪಟಾಕಿಗಳನ್ನು ಹೊಡೆಯುತ್ತಿದ್ದರೆಂಬುದು ಶಾಸನಸ್ಥ ಸಂಗತಿ.