ಕೋಮುವಾದಿ ಕೊಪ್ಪರಿಗೆಗೆ ರಿಝ್ವಿ ಮತಾಂತರದ ಬೆಂಕಿ
ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯು ೨೦೨೪ರ ಲೋಕಸಭಾ ಚುನಾವಣೆಗೆ ಗೆಲುವಿನ ಮೆಟ್ಟಿಲು. ನರೇಂದ್ರ ಮೋದಿ- ಅಮಿತ್ ಶಾ ಪಾಲಿಗೆ ಸೆಮಿಫೈನಲ್. ಹಾಲಿ ಸೆಮಿಫೈನಲ್ ನಲ್ಲಿ ತೇರ್ಗಡೆಯಾದರೆ ೨೦೨೪ರ ಫೈನಲ್ ಸಲೀಸು. ದೇಶದಲ್ಲೇ ಅತಿ ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು (೮೦) ಹೊಂದಿರುವ ಭಾರೀ ರಾಜ್ಯ ಉತ್ತರಪ್ರದೇಶ.
ನೋಟು ರದ್ದು, ಕೋವಿಡ್ ಹೊಡೆತಗಳಿಗೆ ತತ್ತರಿಸಿದ ಜನಸಾಮಾನ್ಯರನ್ನು ಇದೀಗ ನಿರುದ್ಯೋಗ, ಬೆಲೆ ಏರಿಕೆ ಜೀವಂತ ಬೇಯಿಸುತ್ತಿವೆ. ಅವರ ಬದುಕುಗಳನ್ನು ಹಸನು ಮಾಡಲು ವಿಫಲವಾಗಿರುವ ಮೋದಿ-ಯೋಗಿ ಸರ್ಕಾರಗಳ ಬಳಿ ಈ ಕುರಿತು ಉತ್ತರವಿಲ್ಲ. ರೈತರ ಆಕ್ರೋಶದ ಕಾರಣ ಪಶ್ಚಿಮೀ ಉತ್ತರಪ್ರದೇಶ ಕೈಬಿಡುವುದು ಬಹುತೇಕ ನಿಶ್ಚಿತ.
ಹೀಗಾಗಿ ಈಗಾಗಲೆ ಚುನಾವಣೆಗಳ ಗೆಲ್ಲಲು ತನ್ನ ಪಾಲಿನ ಯಶಸ್ವೀ ಸೂತ್ರವೆಂದು ಸಾಬೀತಾಗಿರುವ ಹಿಂದು-ಮುಸ್ಲಿಮರ ನಡುವೆ ಕೋಮುವಾದಿ ಬೆಂಕಿ ಹಚ್ಚುವ ಪಾತಕಕ್ಕೇ ಶರಣಾಗತೊಡಗಿದೆ ಮೋದಿ-ಶಾ-ಯೋಗಿ ತ್ರಿವಳಿ. ಅನುದಿನವೂ ಕೋಮುವಾದದ ಹೊಸ ಕೊಳ್ಳಿಗಳನ್ನು ಹಚ್ಚತೊಡಗಿದ್ದಾರೆ.
ಪ್ರತಿಯೊಬ್ಬ ಔರಂಗಜೇಬನಿಗೆ ಒಬ್ಬ ಶಿವಾಜಿ ಇದ್ದೇ ಇರುತ್ತಾನೆ ಎಂಬ ಪ್ರಧಾನಿಯ ಹೇಳಿಕೆಗೆ ಕೋಮುವಾದಿ ವಿಷವನ್ನು ಕಕ್ಕುವುದ ಬಿಟ್ಟು ಇನ್ಯಾವ ಘನಂದಾರಿ ಉದ್ದೇಶ ಇದ್ದೀತು?
ಸೈಯದ್ ವಸೀಮ್ ಅಹ್ಮದ್ ರಿಝ್ವಿ ಎಂಬ ಅಪ್ಪಟ ಅವಕಾಶವಾದಿ ಮುಸ್ಲಿಮ್ ರಾಜಕಾರಣಿಗೆ ಇತ್ತೀಚೆಗೆ ಹಿಂದೂ ಧರ್ಮದ ದೀಕ್ಷೆ ನೀಡಿರುವುದು ಕೂಡ ಮುಸಲ್ಮಾನ ಒಳಪಂಗಡಗಳಾದ ಶಿಯಾ-ಸುನ್ನಿಗಳ ನಡುವೆ ಮತ್ತು ಹಿಂದೂ-ಮುಸಲ್ಮಾನರ ನಡುವೆ ಬೆಂಕಿ ಹಚ್ಚಿ ಚುನಾವಣೆ ಬೇಳೆ ಬೇಯಿಸಿಕೊಳ್ಳುವ ಪಿತೂರಿ.
ರಿಜ್ವಿಯ ಹೊಸ ಹೆಸರು ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ. ಮುಸಲ್ಮಾನರ ಪೈಕಿ ಉಚ್ಚ ಶ್ರೇಣಿಗೆ ಸೇರಿದ್ದ ಆತನಿಗೆ ಹಿಂದೂ ಧರ್ಮದಲ್ಲಿ ಉಚ್ಚವೆಂದು ಪರಿಗಣಿಸಲಾದ ತ್ಯಾಗಿ ಜಾತಿಯನ್ನು ಹಂಚಿಕೆ ಮಾಡಲಾಗಿದೆ.
ಸಿಬಿಐ ತನಿಖೆ ಸೇರಿದಂತೆ ಆತನ ಮೇಲೆ ಹಲವು ಪೊಲೀಸ್ ಕೇಸುಗಳಿವೆ. ಇಸ್ಲಾಮ್ ಮತ್ತು ಪೈಗಂಬರ್ ಮಹಮ್ಮದ್ ಕುರಿತು ಪುಸ್ತಕ ಬರೆದು ವಿವಾದಗ್ರಸ್ತ ಹೇಳಿಕೆಗಳನ್ನು ನೀಡುತ್ತ ಹಿಂದೂ ನೇತಾರರಿಗೆ ಹತ್ತಿರವಾದ ನಂತರವೂ ಕೇಸುಗಳು ಕರಗಲಿಲ್ಲ. ಹೀಗಾಗಿ ಮತಾಂತರದ ಹೆದ್ದಾರಿಯನ್ನೇ ಹಿಡಿದಿದ್ದಾನೆ.
ಬಾಬರಿ ಮಸೀದಿಯನ್ನು ಕೆಡವಲಾದ ಡಿಸೆಂಬರ್ ಆರನ್ನು ಪವಿತ್ರ ದಿನವೆಂದು ಕರೆದ ರಿಝ್ವಿ ಮೊನ್ನೆ ಡಿಸೆಂಬರ್ ಆರರ ತೇದಿಯಂದೇ ಘಾಜಿಯಾಬಾದಿನ ಡಾಸ್ನಾದೇವಿ ಮಂದಿರದಲ್ಲಿ ವೇದಮಂತ್ರ ಘೋಷ ಹಾಗೂ ಯಜ್ನಯಾಗ ವಿಧಿಗಳ ನಡುವೆ ಹಿಂದೂ ಧರ್ಮ ಸ್ವೀಕರಿಸಿದ. ದೇಗುಲದ ಮುಖ್ಯ ಅರ್ಚಕ ನರಸಿಂಗಾನಂದ ಸರಸ್ವತಿ ರಿಝ್ವಿಗೆ ಹಿಂದೂ ಧರ್ಮದೀಕ್ಷೆ ನೀಡಿದರು. ಬಾಯಾರಿಕೆ ತೀರಿಸಿಕೊಳ್ಳಲು ದೇವಾಲಯದ ಆವರಣದಲ್ಲಿದ್ದ ನಲ್ಲಿಯೊಂದರಿಂದ ನೀರು ಕುಡಿದಿದ್ದ ಮುಸ್ಲಿಮ್ ಬಾಲಕನನ್ನು ಥಳಿಸಿ ಆತನ ಜನನಾಂಗದ ಮೇಲೆ ಒದ್ದು ಬುರುಡೆ ಬಿಚ್ಚಿ ಕೈ ತಿರುವಿ ನೆಲಕ್ಕೆ ಕೆಡವಿ ತುಳಿದಿದ್ದ ಪ್ರಕರಣ ಜರುಗಿದ್ದು ಇಲ್ಲಿಯೇ. ಥಳಿಸುವಿಕೆಯ ಚಿತ್ರೀಕರಿಸಿ ಮುಲ್ಲಾನನ್ನು ನಪುಂಸಕನ ಮಾಡಿಬಿಟ್ಟೆ ಎಂದು ನರಸಿಂಗಾನಂದ ಸರಸ್ವತಿಯವರ ಶಿಷ್ಯ ಹೇಳಿಕೊಂಡಿದ್ದ ವಿಡಿಯೋ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಕ್ಷೋಭೆಯ ಎಬ್ಬಿಸಿತ್ತು.
ಪೈಗಂಬರ್ ಮಹಮ್ಮದ್ ಕುರಿತು ರಿಝ್ವಿ ಅವಹೇಳನಕಾರಿಯಾಗಿ ಬರೆದಿದ್ದ ಪುಸ್ತಕವೊಂದನ್ನು ಕಳೆದ ತಿಂಗಳು ಇದೇ ದೇವಾಲಯದಲ್ಲಿ ನರಸಿಂಗಾನಂದ ಸರಸ್ವತಿಯವರ ಮುಂದೆ ಬಿಡುಗಡೆ ಮಾಡಲಾಗಿತ್ತು. ಎಲ್ಲ ಮುಸಲ್ಮಾನರೂ ಉಗ್ರವಾದಿಗಳು. ವ್ಯತ್ಯಾಸವೇನೂ ಇಲ್ಲ?.ಎಂದು ರಿಝ್ವಿ ಸಾರಿದ್ದ. ಈ ಮಾತು ಹೇಳಿದ್ದಕ್ಕಾಗಿ ನಿಮ್ಮನ್ನು ಗೌರವಿಸುವೆ ಎಂದಿದ್ದರು ನರಸಿಂಗಾನಂದ ಸರಸ್ವತಿ.
ವಿವಾದಗಳೆಂದರೆ ರಿಝ್ವಿಗೆ ಬಲು ಪ್ರೀತಿ. ಅವುಗಳನ್ನು ಹಾಸಿ ಹೊದ್ದು ಉಂಡು ಉಸಿರಾಡುವಾತನೀತ. ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಂಘಪರಿವಾರಕ್ಕೆ ಅಚ್ಚುಮೆಚ್ಚೆನಿಸುವ ಹೇಳಿಕೆಗಳನ್ನೇ ಆತ ನೀಡುತ್ತ ಬಂದಿದ್ದಾನೆ. ೨೦೧೯ರಲ್ಲಿ ’ರಾಮ್ ಕೀ ಜನ್ಮ ಭೂಮಿ’ ಎಂಬ ಚಲನಚಿತ್ರ ತಯಾರಿಸಿದ್ದ. ತನ್ನ ಸಾವಿನ ನಂತರ ದಫನು ಮಾಡಬೇಕೆಂದು ಲಖನೌನ ತಾಲ್ಕಟೋರ ಕರ್ಬಲಾ ಸ್ಮಶಾನದಲ್ಲಿ ಜಮೀನು ಖರೀದಿಸಿ ಮೀಸಲಿರಿಸಿದ್ದ. ಇದೀಗ ಮತಾಂತರ ಹೊಂದಿದ ನಂತರ ಈ ಮೀಸಲನ್ನು ರದ್ದುಪಡಿಸಲಾಗಿದೆ. ಹಿಂದೂ ಧರ್ಮದ ವಿಧಿ ವಿಧಾನಗಳ ಪ್ರಕಾರ ತನ್ನ ಮೃತದೇಹವನ್ನು ಸುಡಬೇಕೆಂದು ಸಾರಿದ್ದಾನೆ.
ರಿಝ್ವಿಯ ತಲೆ ಕಡಿದು ತಂದೊಪ್ಪಿಸಿದರೆ ೧೧ ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಮೊರಾದಾಬಾದಿನ ವಕೀಲನೊಬ್ಬ ಸಾರಿದ್ದ..ಕೋಮುಗಳ ನಡುವೆ ದ್ವೇಷ ಬಿತ್ತುವ ಆಪಾದನೆ ಕುರಿತು ರಿಝ್ವಿ ಮೇಲೆ ಕಾನೂನು ಕ್ರಮ ಜರುಗಿಸಲು ಉತ್ತರಪ್ರದೇಶ ಸರ್ಕಾರ ೨೦೨೦ರ ಫೆಬ್ರವರಿಯಲ್ಲಿ ಪೊಲೀಸರಿಗೆ ಅನುಮತಿ ನೀಡಿತ್ತು. ತನ್ನ ಮೇಲಿನ ಕೇಸುಗಳಲ್ಲಿ ಯಾವ ಹುರುಳೂ ಇಲ್ಲವೆಂದು ರಿಝ್ವಿ ವಾದ.
ರಿಝ್ವಿಯೊಂದಿಗೆ ಎಲ್ಲ ಬಗೆಯ ಸಂಬಂಧಗಳನ್ನೂ ಕಡಿದುಕೊಂಡಿದೆ ಆತನ ಕುಟುಂಬ. ತಾಯಿ, ಸೋದರಿಯರು, ಪತ್ನಿ ಮಕ್ಕಳು ಸೇರಿದಂತೆ ಯಾರೂ ಆತನ ಜೊತೆಗಿಲ್ಲ. ಖುರಾನ್ ನಿಂದ ೨೬ ವಚನಗಳನ್ನು ತೆಗೆದು ಹಾಕುವಂತೆ ಸುಪ್ರೀಮ್ ಕೋರ್ಟಿಗೆ ಅರ್ಜಿ ಹಾಕಿದಾಗಲೇ ರಿಝ್ವಿಯ ಕುಟುಂಬ ಮರುಳನೆಂದು ಜರೆದು ಅವನಿಂದ ದೂರವಾಗಿತ್ತು.
ಪೈಗಂಬರ್ ಮಹಮ್ಮದ್ ಕುರಿತು ವಿವಾದಗ್ರಸ್ತ ಪುಸ್ತಕವೊಂದನ್ನು ಬರೆಯುವ ಜೊತೆಗೆ ಖುರಾನಿನ ೨೬ ವಚನಗಳಿಗೆ ಸವಾಲೆಸೆಯುವ ಮೂಲಕ ರಿಝ್ವಿ ತನ್ನ ಸಮುದಾಯವನ್ನು ಕೆರಳಿಸಿದ್ದ. ಮೂಲ ಖುರಾನಿಗೆ ಆನಂತರ ಸೇರಿಸಲಾಗಿರುವ ಈ ವಚನಗಳು ಹಿಂಸೆಯನ್ನು ಬೋಧಿಸುತ್ತವೆಂದು ಹೇಳಿದ್ದ. ಸಾಂಪ್ರದಾಯಿಕ ಮುಸಲ್ಮಾನರು ಮಾತ್ರವಲ್ಲದೆ ಉದಾರವಾದಿಗಳು ಕೂಡ ತಿರುಗಿಬಿದ್ದಿದ್ದರು. ಮದರಸಾ ಶಾಲೆಗಳನ್ನು ಭಯೋತ್ಪಾದನೆಯ ಕೂಪಗಳೆಂದು ಕರೆದಿದ್ದ.
ಖುರಾನಿನ ೨೬ ವಚನಗಳ ಕುರಿತ ಈತನ ನಡೆ ನುಡಿಯನ್ನು ಬಿಜೆಪಿ ಕೂಡ ಒಪ್ಪಿಲ್ಲ. ಖುರಾನ್ ಸೇರಿದಂತೆ ಯಾವುದೇ ಧರ್ಮಗ್ರಂಥ ಕುರಿತು ಅಸಂಬದ್ಧ ಹೇಳಿಕೆಗಳ ನೀಡುವುದು ತೀವ್ರ ಖಂಡನೀಯ ಕೃತ್ಯ ಎಂಬುದು ನನ್ನ ಪಕ್ಷದ ನಿಲುವು ಎಂದು ಬಿಜೆಪಿಯ ಮುಸ್ಲಿಮ್ ಚಹರೆಗಳಲ್ಲಿ ಒಂದೆನಿಸಿದ ಸೈಯದ್ ಶಾ ನವಾಜ್ ಹುಸೇನ್ ಸ್ಪಷ್ಟಪಡಿಸಿದ್ದುಂಟು.
ಇಸ್ಲಾಮಿಕ್ ಸ್ಟೇಟ್ ಸಂಘಟನೆಯಿಂದ ಹಣ ಪಡೆದು ಮುಸಲ್ಮಾನ ಮಕ್ಕಳನ್ನು ಇತರೆ ಧರ್ಮಗಳು ಮತ್ತು ಮುಖ್ಯಧಾರೆಯ ಶಿಕ್ಷಣದಿಂದ ದೂರ ಇರಿಸುತ್ತಿರುವ ಪ್ರಾಥಮಿಕ ಮದರಸಾಗಳನ್ನು ಮುಚ್ಚುವಂತೆ ೨೦೧೯ರಲ್ಲಿ ಮೋದಿಯವರನ್ನು ಆಗ್ರಹಪಡಿಸಿದ್ದ. ಪ್ರಾಥಮಿಕ ಮದರಸಾಗಳನ್ನು ಮುಚ್ಚದೆ ಹೋದರೆ ಹದಿನೈದ ವರ್ಷಗಳ ನಂತರ ದೇಶದ ಅರ್ಧಕ್ಕೂ ಹೆಚ್ಚು ಮುಸಲ್ಮಾನರು ಐಎಸ್ಐಎಸ್ ವಿಚಾರಧಾರೆಯ ಸಮರ್ಥಕರಾಗಿಬಿಡುತ್ತಾರೆ ಎಂದಿದ್ದ.
ಬಾಬರಿ ಮಸೀದಿ-ರಾಮಮಂದಿರ ವಿವಾದಿತ ನಿವೇಶನದಲ್ಲಿ ರಾಮಮಂದಿರ ಕಟ್ಟಬೇಕೆಂದೂ, ಲಕ್ನೋದಲ್ಲಿ ಮಸೀದಿ ನಿರ್ಮಿಸಬೇಕೆಂದೂ ೨೦೧೭ರಲ್ಲಿ ಹೇಳಿಕೆ ನೀಡಿದ್ದ. ತ್ರಿವಳಿ ತಲಾಖ್ ನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿ ಹೊರಡಿಸಿದ ಕಾನೂನಿನಲ್ಲಿ ಅಪರಾಧಿಗಳಿಗೆ ಮೂರು ವರ್ಷಗಳ ಶಿಕ್ಷೆ ಗೊತ್ತು ಮಾಡಲಾಗಿದೆ. ಈ ಅವಧಿಯನ್ನು ಹತ್ತು ವರ್ಷಗಳಿಗೆ ಏರಿಸುವಂತೆ ಆಗ್ರಹಪಡಿಸಿದ್ದ. ಪಶುಪ್ರಾಣಿಗಳಂತೆ ಮಕ್ಕಳನ್ನು ಹೆರುವುದು ದೇಶಕ್ಕೆ ಹಾನಿಕರವೆಂದು ಹೇಳಿದ್ದ. ಪ್ರಾಚೀನ ಮಂದಿರಗಳನ್ನು ಕೆಡವಿ ನಿರ್ಮಿಸಲಾಗಿರುವ ಮಸೀದಿಗಳ ಜಾಗವನ್ನು ಸರ್ಕಾರ ಪುನಃ ವಶಪಡಿಸಿಕೊಂಡು ಅಲ್ಲಿ ಮಂದಿರಗಳನ್ನು ನಿರ್ಮಿಸುವಂತೆ ಕಳೆದ ವರ್ಷ ಪ್ರಧಾನಿಗೆ ಪತ್ರ ಬರೆದಿದ್ದ. ಉತ್ತರಪ್ರದೇಶದ ಮಥುರಾ, ಜೌನ್ಪುರ ಮಾತ್ರವಲ್ಲದೆ ಗುಜರಾತ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಹಾಗೂ ನವದೆಹಲಿಯ ಮಸೀದಿಗಳನ್ನೂ ಈ ಪಟ್ಟಿಯಲ್ಲಿ ಸೇರಿಸಿದ್ದ.
ಶಿಯಾ ಮತ್ತು ಸುನ್ನಿ ಮುಸಲ್ಮಾನರು ಒಕ್ಕೊರಲಿನಿಂದ ರಿಝ್ವಿಯ ಈ ಅಹವಾಲನ್ನು ಖಂಡಿಸಿದ್ದರು. ಧಾರ್ಮಿಕ ಭಾವನೆಗಳಿಗೆ ನೋವು ಉಂಟು ಮಾಡುವ ಉದ್ದೇಶದ ಪ್ರಚಾರಪ್ರಿಯ ನಾಟಕವೆಂದಿದ್ದರು. ರಿಝ್ವಿಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನಾ ಪ್ರದರ್ಶನಗಳು, ದೂರುಗಳು ದಾಖಲಾಗಿದ್ದವುಮೊನ್ನೆ ಮೊನ್ನೆಯ ತನಕ ಸುಮಾರು ಹತ್ತು ವರ್ಷಗಳ ಕಾಲ ಉತ್ತರಪ್ರದೇಶದ ಶಿಯಾ ಕೇಂದ್ರೀಯ ವಕ್ಫ್ ಮಂಡಳಿಯ ಅಧ್ಯಕ್ಷನಾಗಿದ್ದಾತ ಈ ರಿಝ್ವಿ. ರೇಲ್ವೆ ಇಲಾಖೆಯ ದ್ವಿತೀಯ ದರ್ಜೆಯ ಉದ್ಯೋಗಿಯ ಮಗ. ಕಾಲೇಜು ಶಿಕ್ಷಣ ಪೂರ್ಣಗೊಳಿಸಿಲ್ಲ. ೨೦ ವರ್ಷಗಳ ಹಿಂದೆ ಲಖನೌದ ಹಳೆಯ ಶಹರಿನ ಕಾಶ್ಮೀರ ಮೊಹಲ್ಲಾದಿಂದ ಸಮಾಜವಾದಿ ಪಾರ್ಟಿಯ ಕಾರ್ಪೊರೇಟರ್ ಆಗಿ ಚುನಾಯಿತನಾಗಿದ್ದ. ೨೦೦೮ರಲ್ಲಿ ಶಿಯಾ ವಕ್ಫ್ ಮಂಡಳಿಯ ಸದಸ್ಯನಾಗಿದ್ದ.
ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಶಿಯಾ ಧರ್ಮಗುರು ಕಲ್ಬೇ ಜವ್ವಾದರ ಶಿಫಾರಸಿನ ಮೇರೆಗೆ ೨೦೦೩ರಲ್ಲಿ ಈತನನ್ನು ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷನನ್ನಾಗಿ ನೇಮಕ ಮಾಡಿದ್ದರು
ಸಮಾಜವಾದಿ ಪಾರ್ಟಿ ಸೋತ ನಂತರ ಬಹುಜನಸಮಾಜ ಪಾರ್ಟಿಗೂ, ಬಹುಜನ ಸಮಾಜ ಪಾರ್ಟಿ ಸೋತ ನಂತರ ಪುನಃ ಸಮಾಜವಾದಿ ಪಾರ್ಟಿಗೂ, ಸಮಾಜವಾದಿ ಪಾರ್ಟಿ ಸೋತ ನಂತರ ಭಾರತೀಯ ಜನತಾ ಪಾರ್ಟಿಗೂ ಜಿಗಿದು ಕುರ್ಚಿ ಉಳಿಸಿಕೊಂಡ ಭಂಡ ಈ ರಿಝ್ವಿ.
ಬಿಜೆಪಿ ಮತ್ತು ರಿಝ್ವಿ ಪರಸ್ಪರರನ್ನು ಬಳಸಿಕೊಂಡು ಉತ್ತರಪ್ರದೇಶದ ಹಿಂದೂ- ಮುಸ್ಲಿಮರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ.