ಸಂಭೋಳಿ-ಜನ ಕನ್ನಡಿಯ ಲೋಕ ಕಥನ
ಆತ್ಮ ಕಥನಗಳೆಂದರೆ ಕಳೆದ ನೆನಪುಗಳ ಕಟ್ಟಿಟ್ಟ ಬುತ್ತಿ. ತನ್ನ ತನ್ನ ಸಮುದಾಯದ ಬದುಕಿನ ನೆನಪುಗಳ ಬಳುವಳಿಯನ್ನು ಪಡೆದು ಮುನ್ನೆಡೆದವರ ಸಿಂಹಾವಲೋಕನಗಳು. ಕನ್ನಡ ದಲಿತ ಕಥನಗಳ ಬದುಕ ಬಳುವಳಿಯಾದರೂ ಏನು? ಎಂಬ ಪ್ರಶ್ನೆ ಕೇಳಿಕೊಂಡರೆ ಅವು ನಗೆಯ ಲೇಪನ ಹೊದ್ದ ನೋವು ವಸರುವ ಚಿತ್ರಗಳು.ದಲಿತ ಕಥನಗಳು ಕಾಂಕ್ರೇಟ್ ಕಾಡು ಕಾಣದ ಹಳ್ಳಿಗಳ ಒಡಲಾಳದ ಕರುಳ ಸದ್ದುಗಳು.
ನೆನಪು ಬಿಚ್ಚಿಟ್ಟ ಆ ಬಟ್ಟೆಗಳಲ್ಲಿ ಅನ್ನದ ಉಂಡೆಗಳಿಲ್ಲ. ಬದಲಿಗೆ ಸುಟ್ಟು ಇದ್ದಿಲಾದ ಅನುಭವಗಳು ಕಾಣುತ್ತವೆ. ಕೇರಿಗಳೆಂಬ ಅಲಕ್ಷಿತ ಚೌಕಟ್ಟನ್ನ ಊರೆಂಬ ಕೇಂದ್ರದಜೀವ ವಿರೋಧಿ ನಿಯಮಗಳನ್ನ ತನ್ನದೇ ಸೊಲ್ಲುಗಳಲ್ಲಿ ಮುರಿ ಮುರಿದು ಇಟ್ಟ ಈ ಕಥನಗಳು ಅನಾಥ ದಾರಿಗಳಲ್ಲಿ ನಿಂತು ಸಾವರಿಸಿಕೊಂಡ ಉಸಿರಂತೆ ಕಾಣುತ್ತವೆ. ದಿಕ್ಕೇಡಿ ದೇವರು, ನಿಗೂಢತೆಯ ಮರಗಳಡಿಯಲ್ಲಿ ,ಊರಾಚೆ ಹರಿವ ಹಳ್ಳಗಳ ತಡಿಗಳಲ್ಲಿ ಸ್ಮಶಾನದ ಹಿರೀಕರ ಆತ್ಮಗಳ ಗೂಡುಗಳಲ್ಲಿ ಅರಳಿಕೊಳ್ಳುತ್ತವೆ.
ಜೀವ ಪ್ರಪಂಚವನ್ನ ಪರೀಕ್ಷೆಗೊಡ್ಡುವಂತೆ ಎದುರು ನಿಲ್ಲುವ ಈ ಕಥನಗಳು ನಾಡ ಚರಿತ್ರೆಯ,ಧರ್ಮಗಳ, ರಾಜಕೀಯ ಸಾಲುಗಳ ವೈಭವಗಳನ್ನ ಬುಡಮೇಲು ಮಾಡಲೆಂದೇ ನಿಂತಿವೆ. ಸಂಸ್ಕೃತಿ ನಾಗರೀಕತೆಯ ಸೋಗಿನಲ್ಲಿ ನಿಂತವರ ಹರಾಜಿಗಿಟ್ಟು ಆಲದ ಕಟ್ಟೆಯ ಆ ಬಿಳಿ ನಗೆಯೊಳಗಿನ ಆಳದ ಕಪ್ಪು ಕತ್ತಲುಗಳನ್ನ,ಇಲಾಲು ಹತ್ತಿದ ಲಾಟೀನು ಬೆಳಕನ್ನು ತೋರುವಂತೆ ಕಾಣುತ್ತವೆ.
ದಲಿತ ಆತ್ಮಕತನಗಳು ನೆಪಕ್ಕೆ ವ್ಯಕ್ತಿ ಕಥನಗಳಂತೆ ಕಂಡರೂ ಅವಕ್ಕೆ ಸಮೂಹ ಸ್ವರೂಪವೇ ಕೇಂದ್ರವಾಗಿವೆ. ಇವು ಜೀವ ಪ್ರೀತಿ, ವಾತ್ಸಲ್ಯಗಳನ್ನು ಬೇಡುವ ಬಾಳ ತಲ್ಲಣಗಳನ್ನು ಹೇಳುವ ಕಟ್ಟುಗಳಂತೆ ಕಂಡರೂ ಅವುಗಳ ರೂಪವು ತನ್ನ ಇಡೀ ಜನಾಂಗಗಳನ್ನೇ ಕನ್ನಡಿಯಲ್ಲಿ ತೋರುವಂತಿವೆ.ಇವು ಕುರುಡುತನಕ್ಕೆ ಎದುರಾದ ಪ್ರತಿ ಸಂಸ್ಕೃತಿಯ ಚಿತ್ರಗಳು, ಪ್ರಾದೇಶಿಕ ಜಗಲಿಯ ಕೆಳಗಿನ ಬುನಾದಿಗಳು.
ಗೌರ್ಮೆಂಟ್ ಬ್ರಾಹ್ಮಣ ಮತ್ತು ಊರು ಕೇರಿಗಳ ನಂತರ ಕಾಣಿಸಿಕೊಂಡ ಸಂಬೋಳಿ ಆತ್ಮಕಥನವು ಆ ಎರಡು ಕಥನಗಳಿಗಿಂತ ತನ್ನ ಭಾಷಿಕ ಮತ್ತು ನಿರೂಪಣಾ ವಿಧಾನಗಳಿಂದ ಹೊಸತೆಂಬಂತೆ ಕಾಣುತ್ತದೆ. ಜಾತಿಯ ಸಂಕಟದ ಬೇರಿಡಿದು ಹೊರಟ ಗೌರ್ಮೆಂಟ್ ಬ್ರಾಹ್ಮಣ ಕಥನವು ಜಾತಿ ಬಿಂಬಿಸುವ ಕರಾಳ ರೂಪಗಳನ್ನು ಪ್ರೇಮದ ಪದರಗಳಲ್ಲಿ ಬಿಡಿಸುತ್ತಾ ಹೋಗಿದೆ.
ಬದುಕ ಬೆನ್ನಟ್ಟಿ ಹೊರಟ ಊರು ಕೇರಿ ಆತ್ಮಕಥನವು ಬಡತನಕ್ಕೆ ಕಣ್ಣೀರು ಮಾತ್ರ ಅಂಟಿಕೊಂಡಿಲ್ಲ ಕಿಲಾಡಿತನಗಳ ಚಲಾಕಿಯ, ಅನ್ನದ ಬೆನ್ನಿನ ಹಲವು ಕವಲುಗಳನ್ನು ತೋರುತ್ತದೆ. ಸ್ಮಶಾನ ಮತ್ತು ಬೀದಿಗಳಲ್ಲಿ ಹರವಿಕೊಂಡಿರುವ ಈ ಕಥನವು “ಮಾನವ ಜನ್ಮ ದೊಡ್ಡದು” ಎಂದ ಸಾಲಿನೆದುರೇ ಮಾನವರು ಪ್ರಾಣಿಗಳೊಂದಿಗೆ ಪ್ರಾಣಿಗಳಾಗಿ ದುಡಿವ ಚಿತ್ರವನ್ನು ಕಣ್ಣೆದರುರು ತಂದೊಡ್ಡುತ್ತದೆ.
ಲಕ್ಷ್ಮಣ್ ಅವರ ಸಂಬೋಳಿ ಆತ್ಮಕಥನವು ಗೌರ್ಮೆಂಟ್ ಬ್ರಾಹ್ಮಣದಂತೆ ಮೊನಚಾದ ವ್ಯಂಗ್ಯದ ಶಿರ್ಷಿಕೆಯನ್ನು ಪಡೆದಿಲ್ಲ ಅಥವಾ ಊರು ಕೇರಿಯಂತೆ ತಣ್ಣನೆಯ ಅರ್ಥವನ್ನು ಹೊಂದಿಲ್ಲ. ಇದು ಗತದ ಜನಾಂಗಗಳ ಪೂರ್ವ ಅವಸ್ಥೆಯನ್ನ ನಾವು ಬರುತ್ತೇವೆ ʼಸರಿಯಿರಿ ಸರಿಯಿರಿʼ ಎಂದು ಸಾರುತ್ತಾ ಸಾಗುವ ಜೀವ ವಿರೋಧಿ ಕಾಯಕದ ರೀತಿಯನ್ನೇ ರೂಪಕದಂತೆ ತಂದು ನಿಲ್ಲಿಸಿದೆ. ಈ ಶೀರ್ಷಿಕೆಯೇ ಈ ನೆಲದ ಅಸಮಾನತೆ ಮತ್ತು ಅವಮಾನಗಳನ್ನ ಏಕ ಕಾಲಕ್ಕೆ ಸ್ಫೋಟಿಸುವಂತಿದೆ.
ಎರಡು ಕವಲುಗಳಲ್ಲಿ ಛೇದನಗೊಂಡಿರುವ ಈ ಕಥನವು ಮೊದಲಿಗೆ ಬದುಕಿನ ಕತ್ತಲ ಕಥನವನ್ನೂ ನಂತರ ಒಲವಿನ ಬೆಳದಿಂಗಳ ಕಥನವನ್ನೂ ಹೇಳುತ್ತದೆ. ಕತ್ತಲ ಕಥನವು ಪ್ರತಿ ಸಂಸ್ಕೃತಿಯ ಕಥನವಾಗಿದೆ. ಇದು ಮಣ್ಣಿನ ಕಾವ್ಯಾತ್ಮಕ ಭಾಷೆಯನ್ನ, ನಂಬಿಕೆ,ಪುರಾಣ,ಮೌಖಿಕ ಸಂಕಥನಗಳನ್ನ ಕೂಡಿಸಿಕೊಂಡಿದೆ. ಬೆಳದಿಂಗಳಿನ ಕಥನವು ರಸ್ತೆಗಳ ಹೋರಾಟದ ಬಿರುಸು, ವೈಚಾರಿಕ ಮೊನಚು, ದಲಿತ ಸಮುದಾಯದೊಳಗೇ ಅಡಗಿದ ಬೆರಕಿ ಕಳೆ ಕಸದ ಸೂಕ್ಷ್ಮಗಳನ್ನು ಬೆಸೆದುಕೊಂಡಿದೆ. ಈ ಬರಹಗಳಿಗೆ ಹಿರಿ ಜೀವಗಳ ಮೌಖಿಕ ಕಥನ ಕಲೆಯ ರೀತಿಯೂ ನವಿರು ಹಾಸ್ಯದ ತಂತ್ರಗಾರಿಕೆಯ ಪ್ರೇರಣೆಯೂ ಆತುಕೊಂಡಿದೆ.
ದಲಿತ ಕಥನಗಳು ಪುರುಷ ಬರಹಗಳಾದರೂ ಇವು ಆಳದಲ್ಲಿ ಹೆಣ್ಣು ಕಥನಗಳನ್ನೇ ವಿಸ್ತರಿಸಿಕೊಂಡಿವೆ. ಸಂಬೋಳಿ ಕಥನದಲ್ಲೂ ಅವ್ವನ ನಂಬಿಕೆ,ಬೆರಣಿ ಅಜ್ಜಿಯ ವಾತ್ಸಲ್ಯವೆಂಬ ಸೆರಗು,ಲೇಖಕನ ಬದುಕಿನ ದಿಕ್ಕನ್ನೇ ಬದಲಿಸುವ “ ಏನಪ್ಪಾ ಮರಿ ಒಳ್ಳೇರು ಅಂತ ಜಾತಿ ಕುಲ ಬಿಡಕಾದಾತಾ ನೀನೇ ಹೇಳು?” ಎಂದು ಸಮಾಜಿಕ ಸ್ಥಾಯೀ ರೂಪವನ್ನೇ ಗಟ್ಟಿಗೊಲಿಸುವ , “ ಹಣೆಬರಹಕ್ಕೆ ಹೊಣೆಯಾರು?” ಎಂದು ಕೈ ಚಲ್ಲಿ ಕೂರುವ ಜಾತಿ ಪ್ರಧಾನ ಕಾಲುದಾರಿಗಳ ಕಾಡು ಕಥನವಿದಾಗಿದೆ.
ಜನಪದರಲ್ಲಿ ಅಜ್ಜಿ ಕಥೆಗಳು ಕಥನದ ಕವಲುಗಳನ್ನು ಬೆಳಸಿದರೆ ದಲಿತ ಕಥನಗಳಲ್ಲಿ ಅಜ್ಜಂದಿರ ಕಥನಗಳು ಬದುಕನ್ನು ಪ್ರಖರಗೊಳಿಸಿವೆ. ಪ್ರಸ್ತುತ ಸಂಬೋಳಿಯಲ್ಲೂ ತಾತ ಹೇಳಿದ ಎರಡು ಸಂಗತಿಗಳು ದಲಿತ ಜಗತ್ತಿನ ಪೂರ್ವ ಸ್ಮೃತಿಯನ್ನು ಬಿಂಬಿಸುತ್ತವೆ. “ ಮಾರ್ನೋಮಿ ಹಬ್ದ ದಿನ ರಾತ್ರೆ ನಾನು ಹಿರೀಕ್ರಿಗೆ ಗಟೆ ತಕೊಂಡು ಬಾಣಾವರದ ಕೆರೆ ಕಟ್ಟೆ ಮೇಲೆ ಬತ್ತಿದ್ದೀನಿ. ಕಟ್ಟೆ ಕೆಳ್ಗಡೆ ಗುಂಡು ತೋಪಿನಲ್ಲಿ ದೆವ್ವಗಳು ಸೇರ್ಕಂಡ್ಬುಟ್ಟವೆ. ಕತ್ಲು,ಗೌವೋ ಅನ್ತಾ ಇತ್ತು. ಏನ್ರಪ್ಪಾ ಮನ್ಗೂಳ್ಗೆ ಹೋಗಿದ್ರಾ? ಮಕ್ಳು ಮರಿ ಬಂಧು,ಬಳಗ, ಯಂಗವ್ರೆ?” ಎಂದು ಒಂದು ದೆವ್ವ ಕೇಳಿದ್ರೆ ಇನ್ನೊಂದು ದೆವ್ವ ಹೇಳ್ತು “ ನನ್ಮನೆ ಕತೆನ ನಾನು ಏನಂಥೇಳ್ಳಪ್ಪಾ ನನ್ಸೊಸೆ ದುರಾಂಕಾರಿ ಕಾಣಪ್ಪ. ಬಾಡ್ನೆಸ್ರಿಗೆ ಉಪ್ಪೇ ಹಾಕಿರ್ಲಿಲ್ಲ. ಅದ್ನೇ ತಿಂದು ಬಂದ್ನಪ್ಪಾ” ಅಂತು. ಇನ್ನೊಂದು ದೆವ್ವ “ ನಮ್ಮನೆಯಾಗೆ ಯಡೆ ಸಾಮಾನು, ಬಾಡ್ನೆಸ್ರು ಗಟೆ ಎಲ್ಲಾನೂ ಮಡ್ಗಿದ್ರು ಆದ್ರೆ ಎಲೆ ಅಡಿಕೆ ಜೊತ್ಗೆ ಸುಣ್ಣನೇ ಮಡ್ಗಿರ್ಲಿಲ್ಲಪ್ಪಾ” ಅಂತು. ಅಲ್ಲಿದ್ದ ದೆವ್ವಗಳು ತಲಾಕೊಂದೊಂದು ಮಾತಾಡ್ತಾನೇ ಇದ್ದೋ ಕಾಣಪ್ಪಾ ನನ್ಗೆ ದಿಗ್ಲಾಗಿ ಮನೆ ಕಡೆ ಬಿರ ಬಿರ್ನೆ ನಡೆದ್ಬುಟ್ಟಿದ್ದೆ.
ಪ್ರತಿ ಮಾರ್ನೋಮಿ ಹಬ್ಬದ ದಿನ ಸ್ವರ್ಗದ ಬಾಗ್ಲು ತೆಗೆದು ಬಿಡ್ತಾರೆ, ನಾವು ಮಾರ್ನೋಮಿ ಹಬ್ಬಕ್ಕೆ ಎಡೆ ಹಾಕ್ತಿವಲ್ಲಾ ಅದನ್ನ ತಿನ್ನಾಕೆ ಹೀರೀಕ್ರೆಲ್ಲಾ ಬಂದ್ಬುಡ್ತಾರೆ ಮಗಾ, ಆದ್ರಿಂದ ನಮ್ಮ ಹರೀಕ್ರಿಗೆ ಏನೇನು ಇಷ್ಟ ಅಂತಾ ನಾವು ಚನ್ನಾಗಿ ಜ್ಞಾಪಿಸ್ಕಂಡು ಒಂದೂ ಬಿಡ್ದಂಗೆ ತಂದು ಮಡಗ್ಬೇಕಪ್ಪಾ, ಮಗಾ ನಾನು ಸತ್ಮೇಲೆ ನೀನೂ ನನ್ಗೆ ಎಡೆ ಹಾಕ್ತಿಯಾ ತಾನೆ? ಕೇಳಿದ್ರು.ವೈಚಾರಿಕ ಓದನ್ನು ಭಾವನಾತ್ಮಕ ನಂಬಿಕೆಯ ಜಗತ್ತೊಂದು ಅಲ್ಲಾಡಿಸಬಲ್ಲದು ಎಂಬಂತೆ ಈ ಮಾತುಗಳು ಕಾಣುತ್ತವೆ. ಈ ನೆಲೆಯಲ್ಲೇ ಸೂತಕವಾದ ದೀಪಾವಳಿಯ ಹಬ್ಬದ ಆಚರಣೆಯ ಕಥನವೂ ಕಾಣುತ್ತದೆ.” ಕಥೆ ಮುಗ್ಸಿ ನಮ್ಮ ಪೂರ್ವಿಕರ್ನ ಬಲಿ ತಕೊಂಡ ಹಾಳಾದ ಹಬ್ಬಾನ ನಾವು ಮಾಡ್ಬೋದಾ? ನೀನೇ ಹೇಳ್ಮತ್ತೆ?” ತಾತ ನನ್ಕಣ್ಣಲ್ಲಿ ಕಣ್ಣಿಟ್ಟು ಕೇಳಿದ್ರು. ತಾತನ್ಮುಖ ಕಳೆಗುಂದಿತ್ತು. ತಾತ್ನ ಕಣ್ಗಳು ಚಿಂತಾಕ್ರಾಂತವಾಗಿದ್ದವು. ನನ್ನತ್ರ ಇದ್ದ ಪಟಾಕಿಗಳನ್ನೆಲ್ಲಾ ಬಚ್ಲುಗುಂಡಿಗಾಕಿದ್ದೆ. ಅವತ್ನಿಂದ ಪಟಾಕಿಗಳ್ನಾ ಕೈಯಾಗೆ ಮುಟ್ಟೋದು ಬಿಟ್ಬುಟ್ಟಿದ್ದೆ.
ಭಾವನಾತ್ಮಕ ಜಗತ್ತನ್ನ ಮೀರಿ ಕಾಡುವ ವರ್ತಮಾನದ ಹಸಿವು ದಲಿತ ಲೋಕದ ಪ್ರಧಾನ ಕೇಂದ್ರಗಳಲ್ಲೊಂದು. ಸೂರ್ಯ ಚಂದ್ರ ಚುಕ್ಕಿಗಳನ್ನೆಲ್ಲಾ ನೋಡ ಬಹುದಾದದಂತಹ ಗುಡಿಸಲುಗಳ ಈ ಕಥನಗಳು ಹಸಿವಿನ ಬೆನ್ನಟ್ಟಿ ಅವಮಾನ ಹೊರುವ ಕಥನಗಳಾಗಿಯೂ ಕಾಣುತ್ತವೆ.” ಯುಗಾದಿ ಹಬ್ಬ ಕಳೀತು ಅಂದ್ರೆ ನಮ್ಮಟ್ಟಿಯ ಮಕ್ಳು ಮುದುಕ್ರು,ಕುಂಟರು,ದಿನಗಳನ್ನ ಎಣಸ್ತಾ ಜಾತಕ ಪಕ್ಷಿಗಳಂತೆ ಆ ಕ್ರಿಶ್ಚಿಯನ್ ಜನ್ಗಳ ಬರುವಿಕೆಗಾಗಿ ಕಾಯ್ತಿತ್ತಾರೆ. ಆ ದಿನ ನಮ್ಮಟ್ಟಿ ಜನ್ಗಳ ಕೈಯ್ಯಲ್ಲಿ ಕಾಸು ಜಣ ಜಣ ಅನ್ತಿರ್ತದೆ. ಆ ಹೊತ್ತು ನಾನು ಹೊತ್ತಾರೆನೆ ದಾರಿಯಾಗೆ ನಿಂತ್ಕೊಂಡು ನಮ್ಮಟ್ಟಿ ಮುಂದಾಸಿ ಹೋಗುವ ಕ್ರಿಶ್ಚಿಯನ್ ಜನ್ಗಳ ಹಿಂದೆ ಮುಂದೆ ಮುಖ ಸಪ್ಪಗೆ ಮಾಡ್ಕಂಡು ಬಲ್ಗಯಿ ಚಾಚಿ ಸ್ವಾಮಿ ಮೂರ್ಕಾಸು ಕೊಡ್ರಿ ಸ್ವಾಮಿ ಮೂರ್ಕಾಸು ಬೇಡ್ತಿದ್ದೆ.”
ಆ ಕ್ರಿಶ್ಚಿಯನ್ ಜನ್ಗಳ ಬರುವ ದಿನ ಮಾತ್ರ ನಮ್ಮೂರಿನ ದಾರಿ ಉದ್ದಕ್ಕೂ ಕಲ್ಲಂಗಡಿ ಹಣ್ಣು ಕರ್ಬೂಜದ ಹಣ್ಣು ಐಸ್ ಕ್ಯಾಂಡಿ ತಿಂಡಿ ಪದಾರ್ಥಗಳು ಪೀಪಿ, ಪಿಳ್ಳಂಗೋವಿ,ಆಟದ ಸಾಮಾನ್ಗಳು ಮಾರ್ತಿದ್ರು. ಆ ಬೇಸಿಗೆಯ ಉರಿ ಬಿಸಿಲಾಗೆ ಸ್ವಾಮಿ ಮೂರ್ಕಾಸು ಸ್ವಾಮಿ ಮೂರ್ಕಾಸು ಕೊಡ್ರಿ…ಬೇಡಿ ಬೇಡಿ ಗಂಟ್ಲು ವಣಗೋದಾಗ ಐಸ್ ಕ್ಯಾಮಡಿ ತಕೊಂಡು ಜಲ್ದಿ ಜಲ್ದಿ ತಿಂದು ತಿರ್ಗಾ ಮುಖ ಸಪ್ಗೆ ಮಾಡ್ಕಂಡು ಸ್ವಾಮಿ ಮೂರ್ಕಾಸು ಮೂರ್ಕಾಸು ಬೇಡ್ತಿದ್ದೆ. ಆ ಹೊತ್ತು ಹೊಟ್ಟೆ ತುಂಬಾ ಕಲ್ಲಂಗಡಿ ಹಣ್ಣು ಕರ್ಬೂಜದ ಹಣ್ಣು..ಕ್ರಿಸ್ತಿಯನ್ ಜನ್ಗಳು ನಾವು ಎಂದೂ ನೋಡೇ ಇಲ್ಲದ ತಿನ್ದೆ ಇಲ್ಲದ ತಿಂಡಿಗಳನ್ನು ಕೊಡ್ತಿದ್ರು. ಅದ್ನೆಲ್ಲಾ ತಿಂದೂ ತಿಂದೂ ಹೊಟ್ಟೆ ತುಂಬೋಗ್ಬುಡ್ತಿತ್ತು. ತಿರ್ಗಾ ಅಂಗೇನೆ ಹೊಟ್ಟೆ ತುಂಬಾ ತಿನ್ನೋದಂದ್ರೆ ಮುಂದಿನ ವರ್ಷ ಆ ಕ್ರಿಸ್ತಿಯನ್ ಜನ್ರು ಬಂದಾಗ ಮಾತ್ರ.” ಹಸಿವು ಖಾಯಂ ಆದ ಈ ಬದುಕಿಗೆ ಕೆಲವು ಬಾರಿ ಸಿಕ್ಕ ಅನ್ನವೂ ಕರುಳಿರಿವ ಚಿತ್ರದಂತೆ ಬರುತ್ತದೆ ಎನ್ನುವ ಪ್ರಸಂಗವೂ ಇಲ್ಲಿದೆ. ಅದು ಅನ್ನದೊಂದಿಗೇ ಮಣ್ಣು ತಿನ್ನುವ ಪ್ರಸಂಗ. ಮನೆಯಾಚೆ ಕುಕ್ಕುರು ಕುಳಿತು ತಿನ್ನಬೇಕಾದ ಪ್ರಸಂಗ. ಅನ್ನದ ರುಚಿ ಸವಿವಾಗಲೇ “ ಗಾಳಿ ಬೀಸಲು ಅನ್ನದ ತುಂಬಾ ಮಣ್ಣು ತುಂಬ್ಕಂಡ್ಬುಡ್ತು. ಬಾಯ್ಗಿಕ್ಕಂಡು ಅಗಿದ್ರೆ ಕಲ್ಗಳು ಕರ ಕರ್ನೆ ಗೋಳಡ್ತಿದ್ವು. ಅನ್ನಾನಾ ಬಿಟ್ಟಬುಟ್ರೆ ಏನಾನ ಅಂತಾರೆ ಅನ್ಕಂಡು ನಿಧಾನವಾಗಿ ನಮುಲ್ಕೊಂಡು ಅನ್ನನೆಲ್ಲಾ ತಿಂದು ಮುಗಿಸ್ದೆ” ಅನ್ನವನ್ನು ಇಲ್ಲಿ ಹೊರಗೆ ಕೂಡಿಸಿ ಮಣ್ಣಿನ ಬೊಗಾಣಿಯೊಳಗೆ ನಾಯಿಗೆ ಹಾಕಿದಂತೆ ಹಾಕುವ ಅಸ್ಪೃಷ್ಯತೆಯ ತಣ್ಣಗಿನ ನೋವನ್ನ ಇದು ನೆನಪಿಸುತ್ತದೆ.ಸವರ್ಣಿಯರೂ ಯಾಕೆ ದಲಿತರನ್ನ ಮನೆ,ಬಾವಿ,ಹೋಟೆಲು,ದೇವಸ್ಥಾನಗಳಿಗೆ ಹಳ್ಳಿಗಳಲ್ಲಿ ಸೇರಿಸುವುದಿಲ್ಲ .ಏನು ತಪ್ಪು ಮಾಡದಿದ್ದರೂ ಅವರ ಸಾಲಿನಲ್ಲಿ ಊಟಕ್ಕೆ ಕುಳಿತಿದ್ದಕ್ಕೇ ಕೆಲಸ ಕಳೆದುಕೊಳ್ಳಬೇಕಾದ ಪ್ರಸಂಗವನ್ನ ಕಾಣಿಸುವ ಈ ಚರಿತ್ರೆಯ ದೊಡ್ಡತನವನ್ನ ಹೇಗೆ ಕಾಣಬೇಕು?
ದಲಿತರ ಬದುಕಿಗೆ ಹಸಿವಿನ ನಂಟಿರುವಂತೆಯೇ ಕಳ್ಳತನದ ನಂಟುಗಳು ಅಂಟಿಕೊಂಡಿವೆ. ಈ ಕಥನಗಳು ಕಳ್ಳತನಕ್ಕಾಗಿ ಸಮುದಾಯ ಕೊಡುವ ಶಿಕ್ಷೆಯ ಸ್ವರೂಪಗಳನ್ನೂ ಭಿನ್ನ ಭಿನ್ನ ರೂಪದಲ್ಲಿ ಕಾಣಿಸಿವೆ. ಹೊಲದ ಸಿಹಿ ಹುಣಿಸೆ ಕದಿಯಲು ಹೋದಾಗ ಯಾವ ಮಾಯದಲ್ಲೋ ಹಸಿರಾವಿನಂತೆ ಎದುರಾದ ನಾರಯಣಪ್ಪನ ಕ್ರೌರ್ಯವನ್ನು ಇಲ್ಲಿ ಉಲ್ಲೇಖಿಸಲಾಗಿದೆ.” ನಾವೆಲ್ಲಾ ದಿಕ್ಕಾಪಾಲಾಗಿ ಓಡ್ತಿದ್ದೋ. ನಾನು ಜಾರಕ ಬಂಡೆ ಕಡ್ಗೆ ಬಂಡೆಗಳ ಮೇಲತ್ತಿ ಹಳ್ಳದಾಗೆ ದುಮುಕಿ,ಬೇಲಿಗಳ ದಾಟಿ ಓಡ್ತಿದ್ದೆ. ಮಿಕವನ್ನ ಹಿಡಿಯುವ ಬೇಟೆ ನಾಯಂಗೆ ನಾರಯಣಪ್ಪ ನನ್ನನ್ನು ಅಟ್ಟಾಡಿಸಿ ಹಿಡ್ಕಂಡ್ಬುಟ್ಟ. ಅವನು ಸುಸ್ತಾಗ್ಬುಟ್ಟಿದ್ದ. ಮೇಲಕ್ಕೂ ಕೆಳಕ್ಕೂ ಉಸಿರು ಆಡ್ತಿದ್ದ. ಬೈಯಾಕೋಗ್ತಾನೆ ಉಸಿರು ಅಡ್ಡಿಪಡಿಸ್ತಿತ್ತು. ರವಷ್ಟೊತ್ತು ಸುಧಾರಿಸ್ಕಂಡು…”ನಿಮ್ಮಮ್ಮುನ್ ಗಂಡನ ಜಮೀನ್ದಾಗೆ ಸಿಹಿ ಉಣಸೇ ಮರ ಬೆಳ್ದದೆ ಅಂತ ತಿಳ್ಕಂಡಿದ್ದಿರೇನೋ ಬೋಳಿ ಮಕ್ಳ. ಅಂತ ಬೈಕಂಡು ಬೈಕಂಡು ಹುಚ್ನಾಯೊಡ್ದಂಗೆ ವಡೆದು,ಒದ್ದು ನನ್ನ ಹಣ್ಣುಗಾಯಿ ನೀರುಗಾಯಿ ಮಾಡ್ಬುಟ್ಟಿದ್ದ. ನನ್ನ ಓಡಿಸ್ಕಂಡು ಬರ್ವಾಗ ಅವ್ನ ಕೆರ್ಗಳು ಕಳ್ದೋಗಿದ್ದವು. “ ನನ್ನ ಕೆರ್ಗಳ್ನಾ ಉಡುಕಿ ಕೊಡುಬಾರೋ ಮಾದಿಗ ನನ್ ಮಗನೇ” ಬೈಯ್ಯೋದು ತಲ್ಗೆ ಒಂದೊಂದು ಬಡೆಯೋದು ಮಾಡ್ಕಂಡು ನಾವು ಕುಂತಿದ್ದ ಇಚಲ್ಮರ್ದತ್ತಿಕೆ ಯಳ್ಕಂಡ್ಬಂದ. ಮೊದ್ಲು ಈ ಕಡೆಯಿಂದ ಬಂದೆ. ಆ ಮೇಲೆ ಆ ಕಡೆಗೆ ಓಡ್ದೆ. ಅವುನ್ಗೆ ಅವ್ನೆ ಮಾತಾಡ್ಕಂಡ ನಾನು ಗೋಳಾಡ್ತನೇ ಇದ್ದೆ. ಅವಾಗವಾಗ ಕಣ್ಣೀರು ಸೀಟ್ಕಂತಿದ್ದೆ. “ ನನ್ಕೆರ್ಗಳು ಕಳ್ದೋಗವೆ ಉಡ್ಕಿಕೊಡೋ ನಿನ್ನಮ್ಮುನಾ” ಬೈಯ್ಕಂಡು ಎಗರಿಸಿದ್ದೇ ನನ್ನ ಸೊಂಟಕ್ಕೆ ಒದ್ದ. “ದಬಾಕ್” ಅಂತ ಮಕಾಡೆ ಬಿದ್ದು ಬಿಟ್ಟಿದ್ದೆ. ಹಣೆಗೆ ಏಟ್ಬಿದ್ದು ʼಬುರ್ʼ ಅಂತ ಊದ್ಕಂಡ್ಬುಡ್ತು. ನಾನು ಗೋಳಾಟ ಜಾಸ್ತಿ ಮಾಡ್ದೆ. ಆಗ ಅವ್ನು ಕಟಾಕಟ್ನೆ ಹಲ್ಗಳ್ನ ಕಡ್ಕಂಡು ಯಕ್ಷಿಣಿ ಮಾಡ್ಬೇಡ ಮರ್ಯಾದೆಯಿಂದ ಕೆರ್ಗಳ್ನಾ ಉಡ್ಕಿ ಕೊಡ್ಲಿಲ್ಲಾ ಅಂದ್ರೆ ಕತ್ಮೇಲೆ ಕಾಲಿಕ್ಕಿ ವಸಕ್ಬುಡ್ತೀನಿ. ನಾನು ಹಲ್ಕಚ್ಚಂಡು ಅಳುತ್ತಾ ಕೆರ್ಗಳ್ನಾ ಉಡ್ಕುತ್ತಿದ್ದೆ.ಕಣ್ಣೀರ್ಗೆ ನೆಲಾನೇ ಕಾಣ್ತಿರ್ಲಿಲ್ಲ. ಅವಾಗವಾಗ ಕಣ್ಣೀರು ಸೀಟ್ಕಂತಿದ್ದೆ. ಅವ್ನು ನನ್ಕಯಿ ಮಾತ್ರ ಬಿಟ್ಟೇ ಇರ್ಲಿಲ್ಲ. ಉಗುಣಿ ಗಿಡದ್ಮೇಲೆ ಒಂದ್ಕೆರಾ ಕುಂತುಬಿಟ್ಟಿತ್ತು. ಅದ್ನ ಎತ್ಕೊಟ್ಟೆ. ಅವ್ನು ಅದ್ನ ಒಂದ್ಕಾಲ್ಗೆ ಹಾಕ್ಕೊಂಡ. ಇನ್ನೊಂದ್ಕೆರ ಸಿಕ್ಕಲೇ ಇಲ್ಲ. ಉಡ್ಕಿ ಉಡ್ಕಿ ಸಾಕಾಗೋಯ್ತು. ನಾರಾಯಣಪ್ಪ ಕೆನ್ನೆ ಮೇಲೆ ಕೈ ಇಕ್ಕಂಡು ಜ್ಞಾಪ್ಕ ಮಾಡ್ಕಂಡ . ಅವ್ನೆ ಏನೇನೋ ಮಾತಾಡ್ಕಂಡ. ಹೊತ್ಮುಣ್ಗೋ ದಿಕ್ಕಿನ ಕಡೆ ಮುಂದ್ಕೆ ಯಳ್ಕಂಡೋದ. ಅಲ್ಲೊಂದು ಅಳ್ಳದಾಗೆ ಇನ್ನೊಂದು ಕೆರ ಬಿದ್ದಿತ್ತು. ನನ್ಗೆ ಹೋಗಿದ್ದ ಜೀವ ಬಂದಾಗಾಯ್ತು. ಅಣ್ಣೋ ಅಲ್ಲೈತೆ ಹೇಳ್ದೆ. ಹಳ್ಳಕಿಳ್ದೆ. ಕೆರ ಹಸಿ ಹೇಲಿನ್ಮೇಲೆ ಕುಂತದೆ! ಎತ್ಕಂಡೆ. ಅದು ದುರ್ವಾಸನೆ ವಡೀತಿತ್ತು. ನಾರಾಯಣಪ್ಪನ ಸಿಟ್ಟು ನೆತ್ತಿಗೇರಿತ್ತು. ಅವ್ನ ಮುಖ ಕೇಡು ಸುರಿತಿತ್ತು. ಕಣ್ಗಳು ಕೆಕ್ಕರಿಸಿಕೊಂಡಿದ್ದವು. ಹಲ್ಲಲ್ಲು ಕಟಾಕಟ್ನೆ ಕಡ್ಕಂಡು ಸೀಟೋ ನಿನ್ನಮ್ಮುನಾ.. ಬೈಯ್ಕಂಡು ನನ್ನ ತಲೆ ತಲ್ಗೆ ವಡೀತಿದ್ದ. ಏನ್ರಾಗೆ ಅದ್ನ ಸೀಟ್ಬೇಕು? ಅಂತ ಗೊತ್ತಾಗ್ದೆ ನಾರಾಯಣಪ್ಪನ ಮುಖ ನೋಡ್ದೆ. ನನ್ಮುಕ ಏನೋಡ್ತಿಯೋ ಕಳ್ ನನ್ನ ಮಗನೇ ಕುಡ್ತಾ ಬಿಚ್ಚಿ ಸೀಟು ಗರ್ಜಿಸಿದ. ಸರಕ್ಕಂತ ಕುಡ್ತಾ ಬಿಚ್ಚಿ ಆ ಕೆರಾನ ಸೀಟಿದೆ. ನನ್ ಎಡಗೈಗೆ ಹೇಲಾಗಿಬಿಡ್ತು. ಕುಡ್ತಕ್ಕೆ ಚನ್ನಾಗಿ ಸೀಟ್ಕಂಡೆ. ವಾಸ್ನೆ ಗೀಸ್ನೆ ಅದನೋ ಮೂಸ್ನೋಡೋ ಅಂದ. ಮೂಸ್ನೋಡ್ದೆ. ವಾಸ್ನೆ ರವಷ್ಟು ಇತ್ತು… ಇಲ್ಲಾ ಅಂತ ತಲೆ ಆಡಿಸ್ದೆ. ಕೆರಾನ ನೆಲದ್ಮೇಲೆ ಮಡುಗ್ದೆ. ನಾರಯಣಪ್ಪ ನನ್ತೋಳ್ನಾ ಹಿಡ್ಕಂಡಿರೋದ್ನ ಬಿಟ್ಟ. ಬರೇ ಮೈಯಾಗನೇ ಕುಡ್ತಾನ ಕೈಯಾಗೆ ಹಿಡ್ಕಂಡು ಹಿಂದಿಕ್ತಿರ್ಗಿ ನೋಡ್ದೆ ಹಟ್ಟಿ ಕಡೆ ವಾಟ ಕಿತ್ತಿದ್ದೆ” ಇಲ್ಲಿ ದಲಿತ ಮಕ್ಕಳ ನೋವಿನ ಹನಿಗಳು ಉಳ್ಳವರ ಕಲ್ಲು ಹೃದಯವನ್ನು ಕಾಣಿಸುವಂತೆ ನಿಂತಿದೆ. ಈ ಚಿತ್ರ ಈಗಲೂ ಹಳ್ಳಿಗಳ ಒಡಲಾಳದಿಂದ ಮಾಸಿಲ್ಲ. ಇಂತವು ಬಗೆದಷ್ಟೂ ಬೆಳೆವ ಹಲವು ರೂಪಗಳ ಅಮಾನವೀಯ ಗಣಿಗಳಂತೆ ಈ ನೆಲದಲ್ಲಿ ನಿಂತುಕೊಂಡಿವೆ.
ಕಳ್ಳತನವು ದಲಿತ ಪುರುಷರಿಗೆ ಹಸಿವಿನ ಹಂಬಲವಾದರೆ ಮಹಿಳೆಯರಿಗೆ ನಿಜಾಯಿತಿಯ ರೂಪ ಆಗಿದೆ. ಎಂಬುದನ್ನು ಬೈರಣ್ಣನ ಪತ್ನಿಯ ಬೈಗಳಲ್ಲಿ ಕಾಣಬಹುದು. ಬೈರಣ್ಣನ ಹೆಂಡತಿ ತಿಮ್ಮಕ್ಕ ದುಡಿಯದೇ ಕುಡಿದು ಬಡಿವ ಚರ್ಮವನ್ನು ಕದ್ದು ಮಾರುವ ಗಂಡನ ಕಳ್ಳ ಕಸಬನ್ನ ಕುರಿತು “ ಲೇ ನಾಮರ್ದ ನನ್ಮಗನೇ ನಮ್ಮಂಗೆ ಮೈಯಾಗ್ನ ಬೆವರು ಭೂಮ್ತಾಯಿಗೆ ಬಸಿದು ದುಡಿದು ತನ್ನಲೇ ನೋಡಾನಾ ಆವಾಗ ನಿನ್ನ ನ್ಯಾಯವಸ್ತಾ ಅನ್ತೀನಿ” ಎನ್ನುತ್ತಾ ಮೋಸದ ಮತ್ತು ಕಳ್ಳತನದ ಮಾಲನ್ನ ಸಬ್ಯಸ್ತನ ಥರಾ ರಾಜಾ ರೋಷವಾಗಿ ಎತ್ಕಂಡು ಬಂದು ಅದ್ನ ಮಾರಿ ಕಂಡೋರ ಹಾಟು ಬಾಯಿಗೆ ಬಿಟ್ಕಂಡು ಹೆಂಗಸ್ರತ್ರಾ ಮೀಸೆ ತಿರುಗಿಸ್ತಾ, ಲೇ ನಿನ್ನ ಮೀಸೇನೋ ಒಂದೇ ನನ್ನ ಸಾ…ನೂ ಒಂದೇ ಕಾಣಲೇ ಕಳ್ ನನ್ಮಗ್ನೇ ಮೂಗು ಪ್ರಾಣಿಯ ಜೀವ ತೆಗಿತಾ ಇದಿಯಾ ನನ್ಮಗ್ನೇ ಚನ್ನಾಗಿ ತಿಳ್ಕೋ ನಿನ್ವಂಶ ನಿರ್ವಂಶ ಆಗುಬ್ಡತದೆ ಉಷಾರ್” ದಲಿತರ ಆತ್ಮ ಕಥೆಗಳಲ್ಲಿ ಗಂಡಸರು ಮೈಗಳ್ಳರೂ ಆಗಿರುವುದನ್ನ ಕಾಣಬಹುದು.ಆದರೆ ಹೆಣ್ಣು ಮಕ್ಕಳು ದುಡಿದು ತಿನ್ನುವ ಪ್ರಾಮಾಣಿಕರಂತಿದ್ದಾರೆ. ಈ ನೆಲೆಯಲ್ಲಿಯೇ ಆತ್ಮಕಥನಗಳ ನೆನಪುಗಳ ಕೇಂದ್ರ ಹೆಣ್ಣಾಗಿದ್ದಾಳೆ.ಹೆಣ್ಣ ಹೆಣಿಗೆಯ ಹಲವು ಹೆಜ್ಜೆ ಗುರುತಿನೊಳಗೆ ಜಾತಿಯ ಹಂಗು ಹರಿದ ಹೆಣ್ಣ ನೆರಳುಗಳೂ ಈ ಕಥನಗಳನ್ನು ಹೊತ್ತುಕೊಂಡಿವೆ.